ಚರಿತ್ರೆ

ಬೆನಕವು ಜೂನ್ 1974ರಲ್ಲಿ ಬಿ.ವಿ. ಕಾರಂತರ ಅಮೂಲ್ಯವಾದ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿತು.

ಬಿ.ವಿ. ಕಾರಂತರು ತಮ್ಮ ಏಳನೇ ವಯಸ್ಸಿನಲ್ಲಿ ರಂಗಭೂಮಿಯ ಪ್ರಪಂಚಕ್ಕೆ ನಟರಾಗಿ ಪಾದಾರ್ಪಣೆಗೈದು ನಂತರ ನಿರ್ದೇಶಕರಾಗಿ ಪಿ. ಲಂಕೇಶ್, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ರವರ ಹೆಸರಾಂತ ಕನ್ನಡ ನಾಟಕಕೃತಿಗಳನ್ನು ನಿರ್ಮಾಣ ಮಾಡಿದರು. ಅಲ್ಲದೆ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದ ನಿರ್ದೇಶಕರಾಗಿ ಕಾರ್ಯವಹಿಸಿದರು.

ಕಾರಂತರು ಸಿನಿಮಾರಂಗಕ್ಕೆ ನಿರ್ದೇಶಕರಾಗಿ ಪ್ರಪ್ರಥಮ ಬಾರಿಗೆ ಪಾದಾರ್ಪಣೆಗೈದುದು ವಂಶವೃಕ್ಷದ ಮೂಲಕ. ತದನಂತರ ಇವರು ಹೆಸರಾಂತ 'ಚೋಮನ ದುಡಿ' ಎಂಬ ಚಲನಚಿತ್ರವನ್ನು ತೆರೆಗೆ ತಂದರು. ಇಷ್ಟೇ ಅಲ್ಲದೆ, ಪ್ರಖ್ಯಾತ ಚಲನಚಿತ್ರ ನಿರ್ದೇಶಕರುಗಳಾದ ಜಿ. ವಿ. ಐಯ್ಯರ್, ಮೃಣಾಲ್ ಸೇನ್, ಎಮ್. ಎಸ್. ಸತ್ಯು ಹಾಗೂ ಟಿ. ಎಸ್. ನಾಗಾಭರಣ ರವರ ಚಿತ್ರಗಳಿಗೆ ಸಂಗೀತವನ್ನು ನೀಡಿದರು. ಕಾರಂತರು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಮ್, ಪಂಜಾಬಿ, ಉರ್ದು, ಸಂಸ್ಕೃತ ಮತ್ತು ಗುಜರಾತಿ ಭಾಷೆಗಳಲ್ಲಿ ನೂರಕ್ಕಿಂತ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದರು. ಇವರ ಪ್ರಸಿದ್ಧವಾದ ಕನ್ನಡ ನಿರ್ಮಾಣಗಳು : ಹಯವದನ, ಕತ್ತಲೆ ಬೆಳಕು, ಹುಚ್ಚು ಕುದುರೆ, ಇವಂ ಇಂದ್ರಜಿತ್, ಒಡಿಪಸ್, ಸಂಕ್ರಾಂತಿ, ಜೋಕುಮಾರಸ್ವಾಮಿ, ಸತ್ತವರ ನೆರಳು, ಹುತ್ತವ ಬಡಿದರೆ ಹಾಗು ಗೋಕುಲ ನಿರ್ಗಮನ.


ಇವರು ನಲ್ವತ್ತಕ್ಕಿಂತಲೂ ಹೆಚ್ಚು ನಾಟಕಗಳನ್ನು ಹಿಂದಿ, ಮ್ಯಾಕ್ ಬೆತ್ ಒಳಗೊಂಡು (ಯಕ್ಷಗಾನ ಬಳಸಿ), ಕಿಂಗ್ ಲೀರ್, ಚಂದ್ರಹಾಸ, ಘಾಸಿರಾಂ ಕೋತ್ವಾಲ್, ಮೃಚ್ಚಕಟಿಕ, ಮುದ್ರಾ ರಾಕ್ಷಸ, ಮತ್ತು ಮಾಲವಿಕಾಗ್ನಿಮಿತ್ರಗಳನ್ನು ನಿರ್ದೇಶಿಸಿದರು. ಕಾರಂತರ ಇನ್ನೊಂದು ವಿಶೇಷತೆಯೆಂದರೆ, ಮಕ್ಕಳೊಡನೆ ರಂಗಸ್ಥಳದಲ್ಲಿ ನಾಟಕಗಳ ನಿರ್ದೇಶನ ಮಾಡುವುದು. ಇದರ ಫಲವೆಂಬಂತೆ, ಪಂಜರ ಶಾಲೆ, ನೀಲಿ ಕುದುರೆ, ಹೆಡ್ಡಾಯಣ, ಅಳಿಲು ರಾಮಾಯಣ ಹಾಗೂ ದಿ ಅನ್ ಗ್ರೇಟ್ ಫುಲ್ ಮ್ಯಾನ್ ಎಂಬ ಹಲವಾರು ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದರು.